ಮಲಾವೀ
ಆಗ್ನೇಯ ಆಫ್ರಿಕಾದಲ್ಲಿರುವ ಒಂದು ಗಣರಾಜ್ಯ. ಗ್ರೇಟರಿಫ್ಟ್ ಕಣಿವೆಯ ಉದ್ದಕ್ಕೂ ಇಕ್ಕಟ್ಟಾದ ಭೂಭಾಗವನ್ನು ಆವರಿಸಿಕೊಂಡಿದೆ. ಇದರ ಉತ್ತರಕ್ಕೆ ಟ್ಯಾನ್‍ಜಿನೀಯ ಸಂಯುಕ್ತ ಗಣರಾಜ್ಯ. ದಕ್ಷಣ ಮತ್ತು ಪೂರ್ವಕ್ಕೆ ಮೊಜಾಂಬಿಕ್, ಪಶ್ಚಿಮಕ್ಕೆ ಜಾಂಬೀಯ ಗಣರಾಜ್ಯಗಳಿವೆ. ನ್ಯಾಸಾ ಸರೋವರ ಅಥವಾ ಮಲಾವೀ ಸರೋವರ ಮಲಾವೀ  ದೇಶದ ಪೂರ್ವ ಗಡಿಯುದ್ದಕ್ಕೂ ಹಬ್ಬಿದೆ. ಮಲಾವೀ ಉತ್ತರದಿಂದ ದಕ್ಷಿಣಕ್ಕೆ 837 ಕಿಮೀ ಉದ್ದವಿದ್ದು 80ರಿಂದ 160 ಕಿಮೀ ಅಗಲವಿದೆ. ಒಟ್ಟು ವಿಸ್ತೀರ್ಣ 1,18,485 ಚಕಿಮೀ. ಇದರಲ್ಲಿ 24.208 ಚಕಿಮೀ ವಿಸ್ತೀರ್ಣದ ಸರೋವರಗಳಿವೆ. ಇವುಗಳಲ್ಲಿ ಅತಿದೊಡ್ಡದು 23,050 ಚಕಿಮೀ ವಿಸ್ತೀರ್ಣದ ಮಲಾವೀ ಸರೋವರ. ಜನಸಂಖ್ಯೆ ಅಂದಾಜು 64,27,000 (1983) ರಾಜಧಾನಿ ಲಿಲಾನ್ವೇ.

ಮೇಲ್ಮೈಲಕ್ಷಣ : ಮಲಾವೀಯಲ್ಲಿ ಮುಖ್ಯವಾಗಿ ನಾಲ್ಕು ಸ್ವಾಭಾವಿಕ ವಿಭಾಗಗಳಿವೆ. ಗ್ರೇಟರಿಫ್ಟ್ ಕಣಿವೆ. ಮಧ್ಯಭಾಗದ ಪ್ರಸ್ಥಭೂಮಿಗಳು. ಮಲೆನಾಡು ಪ್ರದೇಶ ಮತ್ತು ಪ್ರತ್ಯೇಕವಾಗಿರುವಂತೆ ತೋರುವ ಪರ್ವತ ಪ್ರದೇಶ. ಗ್ರೇಟೆರಿಫ್ಟ್ ಕಣಿವೆ ಮಲಾವೀಯ ಪ್ರಧಾನ ಮೇಲ್ಮೈ ಲಕ್ಷಣವಾಗಿದ್ದು ದೇಶದುದ್ದಕ್ಕೂ ಉತ್ತರದಿಂದ ದಕ್ಷಿಣಕ್ಕೆ ಹಬ್ಬಿರುವ ಬೃಹದಾಕಾರದ ತಗ್ಗುಪ್ರದೇಶ ಇದರಲ್ಲಿ ನ್ಯಾಸಾ ಸರೋವರ ಮತ್ತು ಪೈರ್ ನದೀ ಕಣಿವೆ ಇವೆ. ಸರೋವರದ ತೀರಪ್ರದೇಶದಲ್ಲಿ ಜೌಗು ಬದಿಗಳೂ ಲಗೂನುಗಳೂ ಇವೆ. ಷೈರ್ ನದೀ ಕಣಿವೆ ನ್ಯಾಸಾ ಸರೋವರದ ದಕ್ಷಿಣದ ತುದಿ ಮಾಂಗೋಚಿಯಿಂದ ನ್ಸಾಂಜೆವರೆಗೆ 402 ಕಿಮೀ ಉದ್ದ ಹಬ್ಬಿದ್ದು ಅದರ ಉತ್ತರದ ತುದಿಯಲ್ಲಿ ಮಾಲೊಂಬೆ ಸರೋವರವಿದೆ. ಮಧ್ಯಭಾಗದ ಪ್ರಸ್ಥಭೂಮಿಗಳು ಸುಮಾರು 162ರಿಂದ 292 ಮೀಟರ್ ಎತ್ತರವಿದ್ದು ದೇಶದ ಒಟ್ಟೂ ಭೂಪ್ರದೇಶದ ಮುಕ್ಕಾಲು ಭಾಗವನ್ನು ಆಕ್ರಮಿಸಿವೆ. ಮಲೆನಾಡು ಪ್ರದೇಶಗಳು ಪ್ರತ್ಯೇಕವಾಗಿದ್ದು ಸಮುದ್ರಮಟ್ಟಕ್ಕೆ ಸುಮಾರು 518 ಮೀಟರ್ ಎತ್ತರವಾಗಿವೆ. ಇವುಗಳಲ್ಲಿ ಮುಖ್ಯವಾದವು ಉತ್ತರ ಮತ್ತು ಪಶ್ಚಿಮ ದಿಕ್ಕುಗಳಲ್ಲಿರುವ ನೈಕ. ವಿಪ್ಯ ಮತ್ತು ಡೋವಾ ಹಾಗೂ ಡೆಡ್ಜ-ಕಿರ್ಕ್ ಪರ್ವತಸ್ತೋಮ ಪ್ರದೇಶ ಮತ್ತು ದಕ್ಷಿಣ ಭಾಗದಲ್ಲಿಯ ಷೈರ್ ಹೈಲ್ಯಾಂಡ್, ಅಲ್ಲಲ್ಲೆ ಪ್ರತ್ಯೇಕವಾಗಿರುವ ಪರ್ವತಗಳು ಮಲಾವೀಯ ನಾಲ್ಕನೆಯ ವಿಭಾಗ. ಇವುಗಳಲ್ಲಿ ಪ್ರಮುಖವಾದವು ಮುಲಂಜೆ (ಸುಮಾರು 3048 ಮೀ) ಮತ್ತು ಜಾಂಬ ಪರ್ವತ (ಸುಮಾರು 1980 ಮೀ).

ಮಲಾವೀಯ ಪ್ರಮುಖ ಜಲಸಂಪತ್ತಾದ ನ್ಯಾಸಾ ಸರೋವರ 1,57,983 ಚ.ಕೀಮೀ ಪ್ರದೇಶಕ್ಕೆ ನೀರು ಒದಗಿಸುತ್ತದೆ. ಈ ಸರೋವರಕ್ಕೆ ಉತ್ತರ ಮತ್ತು ದಕ್ಷಿಣದಲ್ಲಿ ರುಕುರು, ದ್ವಾಂಗ್ವ, ಲಿಲಾಂಗ್ವೆ ಮತ್ತು ಬೂಪ ನದಿಗಳು ಬಂದು ಸೇರುತ್ತವೆ. ಇದರಿಂದ ಹರಿಯುವ ಷೈರ್ ನದಿ ಪಕ್ಕದ ಮಾಲೊಂಬೆ ಸರೋವರದ ಮೂಲದ ಹರಿದು ಮೊಜಾಂಬಿಕನಲ್ಲಿ ಜಾಂಬೀಜೀ ನದಿಯನ್ನು ಸೇರುತ್ತದೆ. ದಾರಿಯಲ್ಲಿ ಇದಕ್ಕೆ ಅನೇಕ ಉಪನದಿಗಳು ಸೇರುತ್ತವೆ. ಮಲಾವೀಯ ಎರಡನೆಯ ಜಲಸಂಪತ್ತಾದ ಚಿಲ್ಲಾ ಸರೋವರಕ್ಕೆ ಫಲಾಂಬೆ ಬಯಲುಗಳು ಮತ್ತು ಪಕ್ಕದ ಹೈಲ್ಯಾಂಡ್‍ಗಳಿಂದ ನದಿಗಳು ಬಂದು ಸೇರುತ್ತವೆ. ಈ ಸರೋವರ ಸುತ್ತಲೂ ಭೂಮಿಯಿಂದ ಸುತ್ತುವರಿದಿದೆ.  ಬೇಸಗೆಯಲ್ಲಿ ಇದರ ನೀರು ಹೆಚ್ಚು ಲವಣಯುಕ್ತವಾಗಿರುತ್ತದೆ.

ವಾಯುಗುಣ: ಇಲ್ಲಿಯ ಹವಾಗುಣ ಆಯಾಪ್ರದೇಶದ ಎತ್ತರ ತುಗ್ಗುಗಳನ್ನು ಅವಲಂಬಿಸಿದ್ದು ಮೇ ಯಿಂದ ಅಕ್ಟೋಬರ್ ತನಕ ಒಣಹವೆ ಮತ್ತು ನವೆಂಬರ್‍ನಿಂದ ಏಪ್ರಿಲ್ ತನಕ ತೇವ ಹವೆಯಿಂದ ಕೂಡಿರುತ್ತದೆ. ಷೈರ್ ಕಣಿವೆ ಮತ್ತು ಸುತ್ತಮುತ್ತಲಿನ ಹೆಚ್ಚು ಎತ್ತರವಿಲ್ಲದ ಸೆಕೆ ಹೆಚ್ಚು ಮತ್ತು ತೇವಾಂಶದಿಂದ ಕೂಡಿದ ಉಷ್ಣವಲಯದ ವಾಯುಗುಣ. ಇಲ್ಲಿಯ ಉಷ್ಣತೆ ಸರಾಸರಿ ಸರಾಸರಿ 23- 26ಚ  ಪ್ರಸ್ಥಭೂಮಿಗಳಲ್ಲಿ ಮತ್ತು ಎತ್ತರದ ಪ್ರದೇಶಗಳಲ್ಲಿ ಹವಾಗುಣ ತಂಪಾಗಿದ್ದು ಸರಾಸರಿ ಉಷ್ಣತೆ 14 ಮತ್ತು ಕೆಳಪ್ರದೇಶಗಳಲ್ಲಿ 18 ಉತ್ತರಭಾಗದಲ್ಲಿ ಮಳೆ ಹೆಚ್ಚು. ವಾರ್ಷಿಕ ಸರಾಸರಿ 180 ಸೆಂಮೀ. ನೈರುತ್ಯ ಭಾಗದಲ್ಲಿ ಅತಿ ಕಡಿಮೆ ವಾರ್ಷಿಕ ಸರಾಸರಿ 70 ಸೆಂಮೀ.

ಮಣ್ಣು: ಇಲ್ಲಿಯ ಶಿಲೆಗಳು 4600 ರಿಂದ 570 ದಶಲಕ್ಷ ವರ್ಷಗಳಷ್ಟು ಹಳೆಯವಾಗಿದ್ದು ಪ್ರಿಕೇಂಬ್ರಿಯನ್ ಕಾಲಕ್ಕೆ ಸೇರಿವೆ. ನೈಸ್ ಶಿಲೆ, ಷಿಸ್ಟ್ ಅಥವಾ ಭಿನ್ನಸ್ತರಶಿಲೆ. ಗ್ರಾನೈಟ್ ಮತ್ತು ನೈನೆಟ್ ಶಿಲೆಗಳಿವೆ. ಆಫ್ರಿಕದ ಬಹುಭಾಗದಲ್ಲಿ ಆವರಿಸಿರುವ 345ರಿಂದ 190 ದಶಲಕ್ಷ ವರ್ಷಗಳಷ್ಟು ಹಳೆಯದಾದ ಕಾರೂ ಎಂದು ಕರೆಯಲಾಗುವ ಅವಸಾದನ ಶಿಲೆಗಳು ಮಲಾವೀಯಲ್ಲಿ ಕಡಿಮೆ ಪ್ರಮಾಣದಲ್ಲಿ ಸರೋವರ ಪ್ರದೇಶ ಮತ್ತು ಷೈರ್ ಕಣಿವೆಗಳಲ್ಲಿ ಸಿಗುತ್ತವೆ. ಗ್ರೇಟ್ ರಿಫ್ಟ್ ಕಣಿವೆಯಲ್ಲಿ ಸಿಗುವ ಶಿಲೆಗಳಲ್ಲಿ ಸರೀಸೃಪ ಪಳೆಯುಳಿಕೆಗಳನ್ನು ಮತ್ತು ಕ್ಷಾರಸಂಬಂಧಿ ಶಿಲೆಗಳನ್ನು ಕಾಣಬಹುದು. ಇಲ್ಲಿಯ ಮಣ್ಣು ಮುಖ್ಯವಾಗಿ ಕೆಂಪುವರ್ಣದ್ದು. ಪ್ರಸ್ಥಭೂಮಿಗಳಲ್ಲಿ ಕಂದುಬಣ್ಣದ ಮತ್ತು ಹಳದಿಬಣ್ಣದ ಮರಳುಗಳಲ್ಲಿನ ಜೇಡಿಮಣ್ಣು ಕಾಣಬಹುದು. ಸರೋವರಗಳ ತೀರ ಪ್ರದೇಶದಲ್ಲಿ ಮತ್ತು ಷೈರ್ ಕಣಿವೆಯಲ್ಲಿ ಮೆಕ್ಕಲು ಮಣ್ಣಿದೆ. ಇದಲ್ಲದೆ ತೀರಪ್ರದೇಶದಲ್ಲಿ ಅತ್ಯಂತ ತೇವವಾದ ಮಣ್ಣು. ಕರಿಮಣ್ಣು ಮತ್ತು ಮರಳು ದಿಬ್ಬಗಳನ್ನು ಕಾಣಬಹುದು

ಸಸ್ಯ ಮತ್ತು ಪ್ರಾಣಿವರ್ಗ : ಇಲ್ಲಿಯ ಸಸ್ಯವರ್ಗ ಅಯಾ ಪ್ರದೇಶದ ಎತ್ತರ, ಮತ್ತು ಹವಾಗುಣವನ್ನಲಂಬಿಸಿದೆ. ಒಣಹವೆಯ ಕೆಳಪ್ರದೇಶಗಳಲ್ಲಿ ಸವನ್ನಾ ಹುಲ್ಲುಗಾವಲುಗಳಿವೆ. ಪ್ರಸ್ಥಭೂಮಿ ಫಲವತ್ತಾಗಿಲ್ಲದ ಭಾಗಗಳಲ್ಲಿ ಮತ್ತು ಇಳಿಜಾರು ಪ್ರದೇಶಗಳಲ್ಲಿ ಮಿಯಾಂಬೊ ಮತ್ತು ಬಾಕ್ ಮರಗಳಿವೆ. ಪ್ರಸ್ಥಭೂಮಿಯ ಫಲವತ್ತಾದ ಪ್ರದೇಶಗಳಲ್ಲಿ ಹಾಗೂ ನದೀ ತೀರ ಪ್ರದೇಶಗಳಲ್ಲಿ ಆಕೇಷಿಯ ಮರಗಳ ಕಾಡು ಪ್ರದೇಶಗಳಿವೆ. ಪ್ರಸ್ಥಭೂಮಿಗಳಲ್ಲಿ ಮಡಾಂಬೊ ಎಂಬ ಹುಲ್ಲಿನಿಂದ ಮುಚ್ಚಿರುವ ತಗ್ಗು ಪ್ರದೇಶಗಳನ್ನು ಕಾಣಬಹುದು. ಚಿಲ್ಲಾ ಸರೋವರ ಮತ್ತು ಷೈರ್ ಕಣಿವೆಯ ಕೆಳಭಾಗದಲ್ಲಿ ಜೌಗು ಪ್ರದೇಶವಿದ್ದು ಅವುಗಳಲ್ಲಿ ಜೊಂಡು ಮತ್ತು ಚಾಪೆ ಹೆಣೆಯುವ ಹುಲ್ಲು ಇವೆ. ಹೈಲ್ಯಾಂಡ್‍ಗಳು ಮತ್ತು ಪರ್ವತ ಶ್ರೇಣಿಗಳಲ್ಲಿ ನಿತ್ಯ ಹಸುರಿನ ಕಾಡುಗಳಿವೆ. ಜನಸಂಖ್ಯೆಯ ಹೆಚ್ಚಳದಿಂದ ಹಾಗೂ ಬೇಸಾಯ ಮತ್ತು ವಾಸದ ಭೂಮಿಗಳ ವಿಸ್ತರಣೆಗಾಗಿ ಈಗ ಕಾಡು ಪ್ರದೇಶಗಳನ್ನು ಬಳಸಿಕೊಳ್ಳಲಾಗುತ್ತಿದೆ. ಅರಣ್ಯ ಪ್ರದೇಶಗಳು ಕಡಿಮೆಯಾದ್ದರಿಂದ ಈಗ ಅಭಯಲಾಮಗಳಲ್ಲಿ ಮಾತ್ರ ಜಿಂಕೆ, ಕಾಡೆಮ್ಮೆ, ಆನೆ, ಚಿರತೆ, ಸಿಂಹ, ಖಡ್ಗಮೃಗ, ಜೀಬ್ರಾ ಮುಂತಾದ ಪ್ರಾಣಿಗಳನ್ನು ನೋಡಬಹುದು. ನ್ಯಾಸ ಸರೋವರದಲ್ಲಿ ನೀರುಕುದುರೆಗಳಿವೆ. ಸರೋವರಗಳು ಮತ್ತು ನದಿಗಳಲ್ಲಿ 200ಕ್ಕೂ ಹೆಚ್ಚು ಬಗೆಯ ಮೀನುಗಳನ್ನು ಕಾಣಬಹುದು. ಇವುಗಳಲ್ಲದೆ ಪಕ್ಷಿಗಳು, ಸರೀಸೃಪಗಳು ಮತ್ತು ವಿವಿಧ ಕ್ರಿಮಿ ಕೀಟಗಳೂ ಇವೆ.

ಜನಜೀವನ : ಮಲಾವೀಯಲ್ಲಿ ಕಪ್ಪು ಆಫ್ರಿಕನ್ನರು ಹೆಚ್ಚು. ಶೇಕಡಾ 66 ಮಂದಿ ಗ್ರಾಮವಾಸಿಗಳು. ಇವರಲ್ಲಿ ಹೆಚ್ಚು ಮಂದಿ ಬಾಂಟು ಪಂಗಡಕ್ಕೆ ಸೇರಿದವರು. ಇತರ ಪ್ರಮುಖ ಪಂಗಡಗಳೆಂದರೆ ಚೆವ, ನ್ಗುರ, ನ್ಯಾಂಜಯವೊ, ಮತ್ತು ಅಂಗೋನಿ. ಯೂರೊಪಿಯನ್ನರೂ ಏಷ್ಯನ್ನರೂ ಮಿಶ್ರಜನಾಂಗದವರೂ ಇದ್ದಾರೆ. ಇಲ್ಲಿಯ ಜನರಲ್ಲಿ ಮಾತೃಪ್ರಧಾನ ಕುಟುಂಬ ವ್ಯವಸ್ಥೆಯಿದ್ದು, ತಾಯಿಯ ಮೂಲಕ ತಮ್ಮ ವಂಶಾನುಕ್ರಮವನ್ನು ನಿರ್ಧರಿಸುತ್ತಾರೆ. ಸಾವಿರಾರು ಮಂದಿ ಮಲಾವೀಯರು ಪಕ್ಕದ ದೇಶಗಳಿಗೆ ಕೆಲಸಕ್ಕಾಗಿ 9 ತಿಂಗಳಿನಿಂದ 2 ವರ್ಷಗಳ ತನಕ ಹೋದಾಗ ಹೆಂಗಸರೇ ದುಡಿದು ಕುಟುಂಬವನ್ನು ಪೋಷಿಸುತ್ತಾರೆ. ಭೂಮಿ ಸಂಪೂರ್ಣ ಕುಟುಂಬದ ಸ್ವತ್ತು. ಜನರ ಮುಖ್ಯ ಆಹಾರ ಮುಸುಕಿನ ಜೋಳ. ಸಾರ್ಗಮ್ ಮತ್ತು ಮಿಲ್ಲೆಟ್, ಇತರ ಬೆಳೆಗಳೂ ಉಂಟು.

ಇಲ್ಲಿಯ ಅಧಿಕೃತ ಭಾಷೆಗಳು ಚಿಚೆವಾ ಮತ್ತು ಇಂಗ್ಲಿಷ್ ಆಗಿದ್ದರೂ ಇಂಗ್ಲಿಷನ್ನು ಅರ್ಥ ಮಾಡಿಕೊಳ್ಳಬಲ್ಲವರ ಸಂಖ್ಯೆ 10ಕ್ಕೂ ಕಡಿಮೆ. ಚಿಚೆವಾ ಭಾಷೆಯನ್ನು ಶೇಕಡಾ 50ಕ್ಕೂ ಹೆಚ್ಚು ಜನ ಮಾತನಾಡುತ್ತಾರೆ ಮತ್ತು ಶೇಕಡಾ 77 ರಷ್ಟು ಜನ ಅರ್ಥ ಮಾಡಿಕೊಳ್ಳಬಲ್ಲರು. ಇಲ್ಲಿಯ ಇತರ ಭಾಷೆಗಳೆಂದರೆ ಚಿಲೋಮ್ವೆ, ಚಿಯಾವೊ, ಮತ್ತು ಚಿಟುಂಬುಕ. ಹೆಚ್ಚು ಮಂದಿ ಕ್ರೈಸ್ತ ಮತ್ತು ಮುಸ್ಲಿಮ್ ಧರ್ಮಾವಲಂಬಿಗಳು.

ಈ ದೇಶ ತನ್ನ ವಿದ್ಯಾಸಂಸ್ಥೆಗಳನ್ನು ನಡೆಸಲು ಹಣ ಮತ್ತು ಉಪಾಧ್ಯಾಯರುಗಳಿಗಾಗಿ ಗ್ರೇಟ್ ಬ್ರಿಟನ್ ಮತ್ತು ಅಮೆರಿಕೆಯನ್ನು ಅವಲಂಬಿಸಿದೆ. ಸುಮಾರು 4500 ಮಕ್ಕಳು ದೇಶದ 17 ಸೆಕಂಡರಿ ಶಾಲೆಗಳಿಗೆ ಹೋಗುವರು. ಮಲಾವಿಯಲ್ಲಿ ಒಂದೇ ಒಂದು ವಿಶ್ವವಿದ್ಯಾಲಯವಿದ್ದು ಅದು ಜೋಂಬಾದಲ್ಲಿ ಸ್ಥಾಪಿತವಾಗಿದೆ(1965).
ಆರ್ಥಿಕತೆ : ಇಲ್ಲಿಯ ಶೇಕಡಾ 85 ರಷ್ಟು ಜನ ಬೇಸಾಯವನ್ನೇ ಅವಲಂಬಿಸಿದೆ. ಒಟ್ಟು ಭೂಮಿಯಲ್ಲಿ 1/3 ಭಾಗ ಮಾತ್ರ ವ್ಯವಸಾಯ ಯೋಗ್ಯ. ದೇಶದ ಒಟ್ಟು ವರಮಾನದಲ್ಲಿ ಶೇಕಡಾ 100ರಷ್ಟು ಭಾಗ ವ್ಯವಸಾಯೋತ್ಪನಗಳ ರಫ್ತೇ ಆಗಿತ್ತು. ಇಲ್ಲಿಯ ಪ್ರಮುಖ ಉತ್ಪನ್ನಗಳು ಟೀ, ಹೊಗೆಸೊಪ್ಪು, ಸಕ್ಕರೆ, ಹತ್ತಿ, ಕಡಲೆಕಾಯಿ, ಮುಸುಕಿನ ಜೋಳ, ಬತ್ತ, ಮತ್ತು ಮರಗೆಣಸು. ನ್ಯಾಸಾ ಸರೋವರದಲ್ಲಿ ಮೀನುಗಾರಿಕೆ ಒಂದು ಪ್ರಮುಖ ಉದ್ಯಮ.

 ಮಲಾವೀಯಲ್ಲಿ ಖನಿಜಸಂಪತ್ತು ಬಲು ಕಡಿಮೆ. ಇರುವ ಖನಿಜ ನಿಕ್ಷೇಪಗಳಲ್ಲಿ ಬಹುಪಾಲು ಸುಲಭವಾಗಿ ಹೊರತೆಗೆಯುವಂತಿಲ್ಲ. ಇಲ್ಲಿಯ ನಿಕ್ಷೇಪಗಳಲ್ಲಿ ಅಪಟ್ಮಟ್ ಒಂದು. ಇದು ರಸಗೊಬ್ಬರಕ್ಕೆ ಉಪಯೋಗಿಸುವ ಕ್ಯಾಲ್ಸಿಯಮ್ ಫಾಸ್ಪೇಟಿನ ಖನಿಜ. ಅಪಟ್ಯೆಟಿನ ಬಂಡೆಗಳು ಚಿಲ್ವಾ ಸರೋವರದ ಸಮೀಪದಲ್ಲಿ ಸಿಗುತ್ತವೆ. ಮುಲಾಂಜಿ ಪರ್ವತ ಶಿಖರಗಳಲ್ಲಿ 65 ದಶಲಕ್ಷ ಟನ್ನುಗಳಷ್ಟು ಬಾಕ್ಸೈಟ್ ನಿಕ್ಷೇಪವಿದೆ. ಡೆಡ್ಜ- ಕಿರ್ಕ್ ರೇಂಜ್‍ನಲ್ಲಿ ಅಲ್ಯೂಮಿನಿಯಮ್ ಸಿಲೀಕೇಟಿನ ಖನಿಜ ಸಯನ್ಯೆಟ್ ಸಿಗುತ್ತದೆ.

ಈ ದೇಶದ ಕೈಗಾರಿಕೆಗಳಲ್ಲಿ ಸಾಬೂನು. ಹತ್ತಿಬಟ್ಟೆಗಳು, ಸಕ್ಕರೆ, ರೇಡಿಯೊ ಪಾದರಕ್ಷೆಗಳ ಉತ್ಪಾದನೆ ಮುಖ್ಯವಾದ್ದದ್ದು. ಇಲ್ಲಿಂದ ರಫ್ತಾಗುವ ಪದಾರ್ಥಗಳಿಗೆ ಪ್ರಮುಖ ಗಿರಾಕಿ ಜಾಂಬೀಯ, ರೊಡಿಷಿಯ, ಅಮೆರಿಕ, ಪಶ್ಚಿಮ ಜರ್ಮನಿ ಮತ್ತು ನೆದರ್‍ಲೆಂಡ್ಸ್.

ಈ ದೇಶದಲ್ಲಿ ಒಟ್ಟು 9700 ಕಿಮೀ ರಸ್ತೆಗಳಿದ್ದು ಮಲಾವಿಯಿಂದ ಟಾನ್‍ಜೀನೀಯ ಜಾಂಬೀಯ ಮತ್ತು ಜûಂಬಾಬ್ವೆಗಳಿಗೆ ರಸ್ತೆ ಸೌಕರ್ಯವಿದೆ. ಇಲ್ಲಿಂದ ಮೊಜೌಂಬಿಕ್‍ನ ಬೈಕಾ ಬಂದರಿಗೆ ರೈಲು ಸೌಕರ್ಯವಿದೆ. ಮಲಾವೀ ಆರ್ಥಿಕ ಹಾಗೂ ಸೈನಿಕ ದೃಷ್ಟಿಯಿಂದ ದಕ್ಷಿಣ ಆಫ್ರಿಕಾದ ಪ್ರಭಾವದ ಪರಿಧಿಯೊಳಗೆ ಬರುತ್ತದೆ. ಇದು ದಕ್ಷಿಣ ಆಫ್ರಿಕಾ ಅಭಿವೃದ್ದಿ ಸಂಯೋಜನಾ ಸಮ್ಮೇಳನದ ಸದಸ್ಯ ರಾಷ್ಟ್ರ.

ಆಡಳಿತ : ಮಲಾವೀ ಗಣರಾಜ್ಯದ 1966ರ ರಾಜ್ಯಾಂಗದ ಪ್ರಕಾರ ದೇಶದ ವರಿಷ್ಠ ಅಧ್ಯಕ್ಷ. ಪ್ರತಿ ಐದು ವರ್ಷಗಳಿಗೊಮ್ಮೆ ಅಧ್ಯಕ್ಷನ್ನನ್ನು ಚುನಾಯಿಸುತ್ತಾರೆ. ಆದರೆ 1970ರ ರಾಜ್ಯಾಂಗ ತಿದ್ದುಪಡಿಯ ಅನುಸಾರ ಹೇಸ್ಟಿಂಗ್ಸ್ ಕಾಮುಜು ಬಂಡ ಆಜೀವ ಅಧ್ಯಕ್ಷರಾಗಿದ್ದಾರೆ. ಅಧ್ಯಕ್ಷ ದೇಶದ ಆಡಳಿತ ನಡೆಸಲು ಮಂತ್ರಿಮಂಡಲವನ್ನು ನೇಮಿಸುತ್ತಾನೆ. ರಾಷ್ರೀಯ ಅಸೆಂಬ್ಲಿಯಲ್ಲಿ 60 ಮಂದಿ ಚುನಾಯಿತ ಸದಸ್ಯರಿರುತ್ತಾರೆ. ಇದಲ್ಲದೆ ಅಧ್ಯಕ್ಷರಿಂದ ನಾಮಕರಣಗೊಂಡ 18 ಮಂದಿ ಸದಸ್ಯರು ಇರುತ್ತಾರೆ. ಇಲ್ಲಿಯ ಒಂದೇ ರಾಜಕೀಯ ಪಕ್ಷವಾದ ಮಲಾವೀ ಕಾಂಗ್ರೇಸ್ ಪಕ್ಷ ಅಧ್ಯಕ್ಷ ಬಂಡರವರ ನೇತೃತ್ವದಲ್ಲಿದೆ. 1966ರ ರಾಜ್ಯಾಂಗ ಸಹ ಈ ಪಕ್ಷವೊಂದಕ್ಕೆ ಮಾನ್ಯತೆ ನೀಡಿದೆ.

ಇತಿಹಾಸ : 16ನೆಯ ಶತಮಾನದಲ್ಲಿ ಮಲಾವೀ ಪಂಗಡದ ಬಾಂಟು ಜನರು ಉತ್ತರದಿಂದ ಈ ಪ್ರದೇಶಕ್ಕೆ ಬಂದರು. 1830ರ ಸುಮಾರಿನಲ್ಲಿ ನ್ಗೋನಿ ಮತ್ತು ಯಾವೊ ಎಂಬ ಬಾಂಟು ಜನ ಈ ಪ್ರದೇಶವನ್ನೆಲ್ಲ ಅಕ್ರಮಿಸಿದರು. ಯಾವೊ ಬುಡಕಟ್ಟಿನವರು ಗುಲಾಮರ ವ್ಯಾಪಾರಿಗಳಾಗಿದ್ದು ಅರಬ್ಬರಿಗೆ ಗುಲಾಮರನ್ನು ಮಾರುತ್ತಿದ್ದರು. 1859ರಲ್ಲಿ ಬ್ರಿಟಿಷ್ ಮಿಷನರಿ ಡೇವಿಡ್ ಲಿವಿಂಗ್ ಸ್ಟೊನ್ ಮಲಾವೀಗೆ ಬಂದು ಸೇರಿದ. ಆಗ ದೇಶ ಸ್ಥಳೀಯ ಯುದ್ದಗಳಿಂದ ಮತ್ತು ವ್ಯಾಪಾರಿಗಳ ಕ್ರೂರತನದಿಂದ ಅತ್ಯಂತ ಹೀನಸ್ಥಿತಿಯಲ್ಲಿತ್ತು. ಇದನ್ನು ನೋಡಿದ ಲಿವಿಂಗ್‍ಸ್ಟೂನ್ ಈ ಪ್ರದೇಶದಲ್ಲಿ  ಶಾಂತಿ ನೆಲಸಲು ಅಲ್ಲಿಯ ವ್ಯಾಪಾರದ ಅಭಿವೃದ್ದಿಗೆ ಮತ್ತು ಕ್ರೆಸ್ತಧರ್ಮದ ಅವಲಂಬನೆಗೆ ಕರೆ ನೀಡಿದ. 1857ರಲ್ಲಿ ಸ್ಕಾಟ್ಲೆಂಡಿನ ಫ್ರೀ ಚರ್ಚ್ ತನ್ನ  ಮತ ಪ್ರಚಾರ ಸಂಸ್ಥೆಯನ್ನು ಸ್ಥಾಪಿಸಿತು. ಮೂರು ವರ್ಷಗಳ ಬಳಿಕ ಸ್ಕಾಟ್ಲೆಂಡಿನ ವ್ಯಾಪಾರಿಗಳು ನ್ಯಾಯಬದ್ಧವಾದ ಗುಲಾಮರ ವ್ಯಾಪಾರಕ್ಕೆ ಆಫ್ರಿಕನ್ ಲೇಕ್ಸ್ ಕಾರ್ಪೊರೇಷನ್ ಸ್ಥಾಪಿಸಿದರು. 1889ರಲ್ಲಿ ಬ್ರಿಟನ್ ನ್ಯಾಸಾ ಸರೋವರದ ಪಶ್ಚಿಮ ತೀರದ ಸ್ಥಳೀಯ ಮುಖ್ಯಸ್ಥರೊಡನೆ ಒಪ್ಪಂದ ಮಾಡಿಕೊಂಡು ಎರಡು ವರ್ಷಗಳ ಅನಂತರ ನ್ಯಾಸಾಲ್ಯಾಂಡ್ ರಕ್ಷಿತ ರಾಜ್ಯವೆಂದು ಘೋಷಿಸಿತು. 1953ರಲ್ಲಿ ಅದನ್ನು ಇನ್ನೆರಡು ಬ್ರಿಟಿಷ್ ಆಶ್ರಿತ ರಾಜ್ಯಗಳಾಗಿದ್ದ ಉತ್ತರ ಮತ್ತು ದಕ್ಷಿಣ ರೊಡೀಷಿಯಗಳೊಡನೆ (ಈಗಿನ ಜಾಂಬೀಯ ಮತ್ತು ಜಿಂಬಾಬ್ವೆ) ಸೇರಿಸಿ ರೊಡೀಷಿಯ ಮತ್ತು ನ್ಯಾಸಾಲೆಂಡ್ ಒಕ್ಕೂಟವನ್ನು ಸ್ಥಾಪಿಸಲಾಯಿತು. ಅಲ್ಲಿಯ ಆಫ್ರಿಕನ್ ನಿವಾಸಿಗಳು ಈ ಒಕ್ಕೂಟ ಸ್ಥಾಪನೆಯನ್ನು ವಿರೋಧಿಸಿದರು. ಆಗಸ್ಟ್ 1961ರ ಚುನಾವಣೆಯಲ್ಲಿ ಮಲಾವೀ ಕಾಂಗ್ರೆಸ್ ಪಾರ್ಟಿ ಈ ಒಕ್ಕೂಟದ ವಿಸರ್ಜನೆ ಮತ್ತು ಮಲಾವೀಗೆ ಸ್ವಾತಂತ್ರ್ಯ ದೊರಕಿಸುವ ಆಶ್ವಾಸನೆಯನ್ನು ಜನರಿಗೆ ನೀಡಿ, ಬಂಡರವರ ನೇತೃತ್ವದಲ್ಲಿ ಬಹುಮತ ಪಡೆಯಿತು. ಫೆಬ್ರುವರಿ 1963ರಲ್ಲಿ ಬಂಡ ಪ್ರಧಾನಮಂತ್ರಿಯಾದರು. ಮತ್ತು ಅದೇ ವರ್ಷ ಡಿಸೆಂಬರಿನಲ್ಲಿ ಈ ಒಕ್ಕೂಟವನ್ನು ವಿಸರ್ಜಿಸಲಾಯಿತು. ಜುಲೈ 1964ರಲ್ಲಿ ನ್ಯಾಸಾಲೆಂಡ್ ಸ್ವತಂತ್ರವಾಗಿ ಮಲಾವೀ ಎಂದು ಹೆಸರಾಯಿತು. ಎರಡು ವರ್ಷಗಳ ತರುವಾಯ ಮಲಾವೀ ಗಣರಾಜ್ಯವಾಗಿ ಏಕಪಕ್ಷೀಯ ರಾಜ್ಯವಾಯಿತು. ಬಂಡ ಅಧ್ಯಕ್ಷರಾಗಿ ಚುನಾಯಿತರಾದರು. 1970ರಲ್ಲಿ  ಆದ ರಾಜ್ಯಾಂಗ ತಿದ್ದುಪಡಿಯ ಅನಂತರ 1971ರಲ್ಲಿ  ಬಂಡ ದೇಶದ ಅಜೀವ ಅಧ್ಯಕ್ಷರಾದರು.
                    (ಜೆ.ಎಸ್.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ